ಫ್ರಾಂಕ್‍ಫರ್ಟ್ 1
ಪಶ್ಚಿಮ ಜರ್ಮನಿಯ ಹೆಸ್ ರಾಜ್ಯದಲ್ಲಿ ಮೇನ್ ನದಿಯ ದಡದಲ್ಲಿರುವ ನಗರ.  ಇದರ ಪೂರ್ಣ ಹೆಸರು ಫ್ರಾಂಕ್‍ಫರ್ಟ್ ಆನ್‍ಮೇನ್.  ಇದು ಮೈಂಟ್ಸ್ ಬಳಿ ಮೇನ್ ಮತ್ತು ರೈನ್ ನದಿಗಳ ಸಂಗಮದ ಪೂರ್ವಕ್ಕೆ 30 ಕಿಮೀ ದೂರದಲ್ಲಿದೆ.  ಜನಸಂಖ್ಯೆ 628,203 (1979).

	ಮೇನ್ ನದಿಯ ಎರಡೂ ದಂಡೆಗಳಲ್ಲಿ ವ್ಯಾಪಿಸಿರುವ ಈ ನಗರ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರ.  ರಾಸಾಯನಿಕ ಮತ್ತು ಔಷಧ ವಸ್ತುಗಳು, ವಿದ್ಯುತ್ ಉಪಕರಣಗಳು, ಚರ್ಮದ ವಸ್ತುಗಳಿಗೆ ಸಂಬಂಧಿಸಿದ ಕಾರ್ಖಾನೆಗಳಿವೆ.  ಮುದ್ರಣ ಮತ್ತು ಪುಸ್ತಕ ವ್ಯಾಪಾರ ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳಲ್ಲಿ ಒಂದು.  ಮಾಂಸ ಭಕ್ಷ್ಯಗಳ ತಯಾರಿಕೆಯ ಉಪಕರಣಗಳಿಗೆ ಈ ನಗರ ಪ್ರಸಿದ್ಧಿ.  ಇದು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು ವ್ಯವಹಾರದ ಕೇಂದ್ರ.

	ಈನಗರದ ಬಳಿ ರಾಷ್ಟ್ರೀಯ ಹೆದ್ದಾರಿಗಳು ಕೂಡುತ್ತವೆ.  ಫ್ರಾಂಕ್‍ಫರ್ಟ್ ಪಶ್ಚಿಮ ಜರ್ಮನಿಯ ರೈಲುಮಾರ್ಗ ಸಂಪರ್ಕ ಜಾಲದ ಮುಖ್ಯ ಕೇಂದ್ರ.  ಇಲ್ಲಿಯ ರೈನ್‍ಮೇನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಂಚಾರದಲ್ಲಿ ಯೂರೋಪಿನಲ್ಲಿ ಮೂರನೆಯ ಸ್ಥಾನಗಳಿಸಿದೆ (1971).  ಹೊಸ ಉಪನಗರ ನಾರ್ಟ್‍ವೆಸ್ಟ್ ಷಟಾಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ.  1950ರ ತರುವಾಯ ಹಲವಾರು ಗಗನಚುಂಬಿ ಕಟ್ಟಡಗಳು ನಿರ್ಮಿತವಾಗಿವೆ.  ನಗರದ ಪೂರ್ವಭಾಗದಲ್ಲಿ ಪ್ರಾಣಿಶಾಸ್ತ್ರ ಸಂಬಂಧವಾದ ಉದ್ಯಾನಗಳಿವೆ.  ಐತಿಹಾಸಿಕ ವಸ್ತುಸಂಗ್ರಹಾಲಯ, ಕಲಾ ಅಕಾಡಮಿ ಮತ್ತು ಪ್ರಾಕೃತಿಕ ಇತಿಹಾಸದ ಸೆಂಕೆನ್ ಬರ್ಗ್ ವಸ್ತುಸಂಗ್ರಹಾಲಯವಿದೆ.  ಇಲ್ಲಿ ಪ್ರಪಂಚ ವಿಖ್ಯಾತ ಸಾಹಿತಿ ಗಯಟೆ ಹುಟ್ಟಿದ ಮನೆ ಮತ್ತು ವಸ್ತುಸಂಗ್ರಹಾಲಯವಿದೆ.  ಅವನ ಹೆಸರಿನಲ್ಲಿ ಯೊಹಾನ್ ವೂಲ್ಫ್‍ಗ್ಯಾಂಗ್ ಗಯಟೆ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.

	ಇತಿಹಾಸ : ಫ್ರಾಂಕ್‍ಫರ್ಟ್ ನಗರ ಪ್ರದೇಶದಲ್ಲಿ ಕ್ರಿ.ಶ. ಒಂದನೆಯ ಶತಮಾನಕ್ಕೆ ಸೇರಿದ ರೋಮನ್ ವಸತಿ ನಿವೇಶನವಿದ್ದುದು ಕಂಡುಬಂದಿದೆ.  ಈ ಸ್ಥಳಕ್ಕೆ ಸುಮಾರು ಕ್ರಿ.ಶ. 500 ಹೊತ್ತಿಗೆ ಫ್ರಾಂಕ್‍ಫರ್ಟ್ ಎಂಬ ಹೆಸರು ಬಂದಿತು.  ಈ ಊರು ಒಂಬತ್ತನೆಯ ಶತಮಾನದಿಂದಲೂ ರಾಜಕೀಯ ಮಹತ್ವ ಪಡೆದಿತ್ತು.  1215ರಲ್ಲಿ ನಿರ್ಮಿತವಾದ ಸೇಂಟ್ ಬಾರ್ಥಲೋಮಿಯಾ ಚರ್ಚ್ ಇಲ್ಲಿದೆ.  1219ರ ಸೇಂಟ್‍ಲಿಯೋನ್ ಹಾಡ್ ಕಿರ್ಷೆ ಚರ್ಚ್ ಇನ್ನೊಂದು ಪ್ರಾಚೀನ ಸ್ಮಾರಕ.  ಮಧ್ಯ ಯುಗದ ಮತ್ತು ಇತ್ತೀಚಿನ ಕಾಲಕ್ಕೆ ಸೇರಿದ ವಿವಿಧ ಚರ್ಚುಗಳೂ ಹದಿಮೂರನೆಯ ಶತಮಾನದ ರೋಮನೆಸ್ಕ್ ಆರಾಧನಾ ಮಂದಿರ ಹಳೆಯ ಕೋಟೆ ಮುಂತಾದುವುಗಳಿವೆ.  47 ಮೀಟರ್ ಎತ್ತರವಿರುವ ಎಷ್ಚೆನ್ ಹೈಮರ್ ಟಾರ್ (1426-28) ಇಲ್ಲಿಯ ಹಳೆಯ ಗುಂಡು ಗೋಪುರ.

	ಹದಿನಾಲ್ಕರಿಂದ ಹದಿನೆಂಟನೆಯ ಶತಮಾನದ ತನಕ ಈ ಊರಿನಲ್ಲಿ ಜರ್ಮನ್ ರಾಜರ ಆಯ್ಕೆ ನಡೆಯುತ್ತಿತ್ತು.  1582ರಿಂದ 1782ರ ತನಕ ಇಲ್ಲಿ ಆಯ್ಕೆಯಾದ ಜರ್ಮನ್ ರಾಜರ ಕೀರಿಟಧಾರಣೆಯ ಉತ್ಸವವೊ ಇಲ್ಲಿ ನಡೆಯುತ್ತಿತ್ತು.  1866ರಲ್ಲಿ ಈ ನಗರ ಪ್ರಷ್ಯದ ವಶವಾಯಿತು.  1871ರಲ್ಲಿ ಫ್ರಾನ್ಸ್ ಮತ್ತು ಪ್ರಷ್ಯಗಳ ನಡುವೆ ಇಲ್ಲೆ ಯುದ್ಧ ಒಪ್ಪಂದವಾಯಿತು.  1944ರ ತನಕ ಇದು ಜರ್ಮನಿಯಲ್ಲೆ ಅತ್ಯಂತ ದೊಡ್ಡದಾದ ಮಧ್ಯಯುಗದ ನಗರವಾಗಿತ್ತು.  ಎರಡನೆಯ ಮಹಾಯುದ್ಧದ ಕಾಲದಲ್ಲಿ ಅಪಾರ ಹಾನಿಗೊಳಗಾಯಿತು.  ಮಹಾಯುದ್ಧದ ಬಳಿಕ ಈ ನಗರ ಪಶ್ಚಿಮ ಜರ್ಮನಿಗೆ ಸೇರಿ ಅಪಾರ ಬೆಳವಣಿಗೆ ಕಂಡಿದೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ